ಪಾರ್ಸ್‍ನಿಪ್  
ಸಮಶೀತೋಷ್ಣವಲಯದಲ್ಲಿ ಬೆಳೆಯುವ ತರಕಾರಿ ಸಸ್ಯ.  ಏಪಿಯೇಸೀ ಕುಟುಂಬಕ್ಕೆ ಸೇರಿದೆ.  ಪಾಸ್ಟಿನಾಕ ಸಟೈವ ಅಥವಾ ಪ್ಯೂಸಿಡಾನಮ್ ಸಟ್ಟೆವಮ್ ಇದರ ವೈಜಾÐನಿಕ ಹೆಸರು. 

ಗ್ರೀಕ್ ಮತ್ತು ರೋಮನ್ನರ ಕಾಲದಿಂದಲೂ ಇದು ಗೆಡ್ಡೆ ತರಕಾರಿಯಾಗಿ ಬಳಕೆಯಲ್ಲಿದೆ.  ಯೂರೋಪಿನಲ್ಲಂತೂ ಇದು ಸರ್ವೇಸಾಮಾನ್ಯವಾದ ತರಕಾರಿ.  ಮೂಲತಃ ಇದು ಯೂರೋಪಿನ ಸಸ್ಯವಾದರೂ 18  ನೆಯ ಶತಮಾನದ ಆದಿಯ ವೇಳೆಗೆ ಅಮೆರಿಕಾಕ್ಕೂ ಕಾಲಿಟ್ಟಿತು.  ಅಪೂರ್ವವಾಗಿ ಇದನ್ನು ಭಾರತದಲ್ಲೂ ತೋಟಗಳಲ್ಲಿ ಬೆಳೆಸುವುದುಂಟು.
ಪಾರ್ಸ್‍ನಿಪ್ ಒಂದು ಬಹುವಾರ್ಷಿಕ ಸಸ್ಯ.  ಸಬ್ಬಸಿಗೇ ಗಿಡವನ್ನು ಹೋಲುತ್ತದೆ.  ಇದರಲ್ಲಿ ದ್ವಿಸಂಯುಕ್ತ ಮಾದರಿಯ ಎಲೆಗಳಿವೆ.  ಪುಷ್ಪಮಂಜರಿ ಸಂಯುಕ್ತ ಅಂಬೆಲ್ ಬಗೆಯದು.  ಹೂಗಳ ಬಣ್ಣ ಹಳದಿ.  ಕಾಯಿ ಚಪ್ಪಟಯಾದ ಹಾಲೆಗಳಿಂದ ಕೂಡಿದೆ.  ಹಾಲೆಗಳ ಮೇಲೆ ಗೆರೆಗಳುಂಟು.  

ಪಾರ್ಸ್‍ನಿಪ್ ಗೆಡ್ಡೆ ಹೆಚ್ಚು ಕಡಿಮೆ ಕ್ಯಾರೆಟ್ (ಗಜ್ಜರಿ) ಗೆಡ್ಡೆಯಂತಿದೆ.  ಬೆಳೆಸುವ ಕ್ರಮ ಮತ್ತು ಮಣ್ಣಿನ ಗುಣವನ್ನವಲಂಬಿಸಿ ಇದರ ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.  ಇದನ್ನು ಗಟ್ಟಿಯಾದ ಮಣ್ಣಿನಲ್ಲಿ ಇಲ್ಲವೇ ಹರಳು ಕಲ್ಲುಗಳಿರುವ ಮಣ್ಣಿನಲ್ಲಿ ಬೆಳೆಸಿದರೆ ಗೆಡ್ಡೆಗಳ ಗಾತ್ರ ಚಿಕ್ಕದಿದ್ದು ಅವು ಕವಲುಗಳಿಂದ ಕೂಡಿರುತ್ತವೆ.  ಪಾರ್ಸ್‍ನಿಪ್‍ಗೆ ಕಲ್ಲುರಹಿತವಾದ, ನೀರಿನ ತೇವವನ್ನು ಉಳಿಸಿಕೊಳ್ಳುವ ಹಾಗೂ ಸುಣ್ಣದ ಅಂಶ ಚೆನ್ನಾಗಿರುವ ಮಣ್ಣು ಒಳ್ಳೆಯದು.  ಹಟ್ಟಿ ಗೊಬ್ಬರಕ್ಕಿಂತ ಬೇರೆ ತೆರನ ಗೊಬ್ಬರಗಳನ್ನು ಬಳಸಬಹುದು.
ನೆಲವನ್ನು ಉತ್ತು ಮಧ್ಯಂತರ 27 ಸೆಂ.ಮೀ. ಅಳತೆಯ ಹೊಂಡಗಳನ್ನು ಮಾಡಿ ಒಂದೊಂದು ಹೊಂಡದಲ್ಲೂ 6-7 ಬೀಜಗಳನ್ನು ಬಿತ್ತಲಾಗುತ್ತದೆ.  ಬೀಜಗಳು ಮೊಳೆಯುವುದು ಬಹಳ ನಿಧಾನ.  ಕೆಲವಂತೂ ಮೊಳೆಯುವುದೇ ಇಲ್ಲ.  ಒಂದೇ ಹೊಂಡದಲ್ಲಿ ಹೆಚ್ಚು ಬೀಜಗಳು ಮೊಳೆತರೆ ಚೆನ್ನಾಗಿರುವ ಒಂದು ಗಿಡವನ್ನು ಬಿಟ್ಟು ಉಳಿದವನ್ನು ತೆಗೆದುಹಾಕಲಾಗುತ್ತದೆ.  ಅನಂತರ ಪಾರ್ಸ್‍ನಿಪ್ ಬೆಳೆಗೆ ಹೆಚ್ಚು ಗಮನ ನೀಡಬೇಕಿಲ್ಲ.  ಆಗಾಗ ಕಳೆ ಗಿಡಗಳನ್ನು ಕಿತ್ತು ಸುತ್ತಲಿನ ಮಣ್ಣನ್ನು ಸ್ವಲ್ಪ ಅಗೆದರಾಯಿತು.  ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬಿತ್ತಿ ಅಕ್ಟೋಬರಿನಲ್ಲಿ ಗೆಡ್ಡೆಗಳನ್ನು ಪಡೆಯಲಾಗುತ್ತದೆ.  

ಪಾರ್ಸ್‍ನಿಪ್ಪಿನಲ್ಲಿ ಸಕ್ಕರೆಯ ಅಂಶ ಬೀಟ್ರೂಟ್‍ನಲ್ಲಿರುವುದಕ್ಕಿಂತ ಹೆಚ್ಚಿನ ಮೊತ್ತದಲ್ಲಿದೆ.  ಕೊಬ್ಬಿನ ಅಂಶವೂ ಇದೆ.  ಗೆಡ್ಡೆಯನ್ನು ತರಕಾರಿಯಾಗಿ ಉಪಯೋಗಿಸುವಾಗ ಹುರಿದು ಅಥವಾ ಬೇಯಿಸಿ ತಿನ್ನುತ್ತಾರೆ.  ಇದರಿಂದ ಮದ್ಯವನ್ನು ತಯಾರಿಸುವುದಿದೆ.  ದನಕರುಗಳಿಗೂ ಆಹಾರವಾಗಿ ಬಳಸುವುದುಂಟು.  

ಹೆರಾಕ್ಲಿಯಮ್ ಸ್ಟೋಂಡಿಲಿಕಮ್ ಎಂಬುದು ಇನ್ನೊಂದು ಜಾತಿಯ ಪಾರ್ಸ್‍ನಿಪ್ ಇದಕ್ಕೆ ಆಕಳ ಪಾರ್ಸ್‍ನಿಪ್ ಎಂಬ ಹೆಸರಿದೆ.  ತಯಂ ಜಾತಿಗೆ ಸೇರಿದ ಮತ್ತೊಂದು ಬಗೆಯ ಪಾರ್ಸ್‍ನಿಪ್ ಜವುಗು ಪ್ರದೇಶದಲ್ಲಿ ಬೆಳೆಯುವುದರಿಂದ ಅದನ್ನು ಜಲ ಪಾರ್ಸ್‍ನಿಪ್ ಎಂದು ಕರೆಯಲಾಗುತ್ತದೆ.			(ಯು.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ